Resources Resources on Novel Coronavirus Disease (COVID-19)

Coronavirus disease (COVID-19) — Frequently Asked Questions

Gautam Menon

Jump to Contents

In the wake of the present global pandemic, there has been a rapid proliferation of misinformation and rumours related to coronavirus infection and disease, particularly via social media. We requested Gautam Menon, Professor of Physics and Biology at Ashoka University, Sonipat and Institute of Mathematical Sciences, Chennai, to answer some of the most common questions being asked about the virus and clear up some misconceptions.

ಕೊರೊನಾ (ಕೋವಿಡ್-‌19) ವೈರಸ್‌ ಎಂದರೇನು? ಇದರ ಬಗ್ಗೆ ಕಾಳಜಿ ಏಕೆ?

ಕೋವಿಡ್-‌೧೯ ಎನ್ನುವುದು ಒಂದು ಸೋಂಕು ರೋಗ. ಇದನ್ನು ಉಂಟು ಮಾಡುವ ವೈರಸ್ಸು ಕೊರೊನಾ ವೈರಸ್‌ ಬಗೆ. ಇದರಲ್ಲಿ ಕಿರೀಟದಲ್ಲಿ ಇರುವಂತಹ ಮುಳ್ಳುಗಳಂತಹ ರಚನೆಗಳು ಇರುವುದರಿಂದ ಕೊರೊನಾ ಎನ್ನುವ ಹೆಸರು ಬಂದಿದೆ. ಕೊರೊನಾ ಎಂದರೆ ಲ್ಯಾಟಿನ್‌ ಭಾಷೆಯಲ್ಲಿ ಕಿರೀಟ ಎಂದು ಅರ್ಥ.

ವೈರಸ್ಸುಗಳು ಮನುಷ್ಯರಲ್ಲಿ ಹಲವು ಖಾಯಿಲೆಗಳನ್ನು ಉಂಟು ಮಾಡುತ್ತವೆ. ಪೋಲಿಯೋ, ದಡಾರ, ಫ್ಲೂ, ಮತ್ತು ನೆಗಡಿ ಇಂತಹ ಕೆಲವು ಖಾಯಿಲೆಗಳು. ಇವುಗಳಲ್ಲಿ ಕೆಲವಕ್ಕೆ ಲಸಿಕೆಗಳು ಇವೆ. ನಾವು ಚಿಕ್ಕವರಿರುವಾಗ ನಮಗೆ ನೀಡುವ ಲಸಿಕೆಗಳು ಈ ರೋಗಗಳಲ್ಲಿ ಕೆಲವನ್ನು ತಡೆಯಬಲ್ಲವು. ಎಲ್ಲವನ್ನೂ ಅಲ್ಲ. ಫ್ಲೂ ತಡೆಯಲು ಒಂದು ಲಸಿಕೆ ಇದೆ. ಇದನ್ನು ದೊಡ್ಡವರಾದ ಮೇಲೂ ಚುಚ್ಚಿಸಿಕೊಳ್ಳಬಹುದು. ಆದರೆ ಸರಿಯಾಗಿ ರಕ್ಷಣೆ ಪಡೆಯಲು ಪ್ರತಿ ವರ್ಷವೂ ಇದನ್ನು ಚುಚ್ಚಿಸಿಕೊಳ್ಳಬೇಕು. ನಮ್ಮ ದೇಹದ ರೋಗ ರಕ್ಷಣಾ ವ್ಯವಸ್ಥೆಯು ವೈರಸ್ಸು ದೇಹವನ್ನು ಹೊಕ್ಕ ಕೂಡಲೇ ಗುರುತಿಸಿ ಅದರ ಜೊತೆ ಹೋರಾಡುವಂತೆ ಈ ಲಸಿಕೆಗಳು ದೇಹವನ್ನು ಸಿದ್ಧಪಡಿಸುತ್ತವೆ.

ಆದರೆ ನಮ್ಮ ದೇಹಕ್ಕೆ ಪರಿಚಯವೇ ಇಲ್ಲದ ವೈರಸ್ಸು ದೇಹವನ್ನು ಹೊಕ್ಕಾಗ ಸಮಸ್ಯೆ ಉಂಟಾಗುತ್ತದೆ. ಹಂದಿ, ಕೋಳಿ, ಬಾವಲಿಗಳೇ ಮುಂತಾದ ಹಕ್ಕಿ ಪ್ರಾಣಿಗಳಲ್ಲಿ ಇರುವಂತಹ ವೈರಸ್ಸುಗಳು ನಮ್ಮ ದೇಹವನ್ನು ಹೊಕ್ಕಾಗ ಹೀಗಾಗುತ್ತದೆ. ಕೆಲವೊಮ್ಮೆ ಇವು ಮನುಷ್ಯರನ್ನು ತಾಕಬಹುದು. ಆಗ ಮನುಷ್ಯರಲ್ಲಿ ಹೊಸ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಕೋವಿಡ್‌-19 ಇಂತಹ ಒಂದು ಸೋಂಕು. ಇದಕ್ಕೆ ಕಾರಣವಾದ ವೈರಸ್ಸು ಬಾವಲಿಗಳಿಂದ ಬಂದಿರಬೇಕು ಎಂದು ನಂಬಲಾಗಿದೆ.

ಹಲವು ಕಾರಣಗಳಿಂದಾಗಿ ಕೋವಿಡ್‌-19ರ ಬಗ್ಗೆ ನಾವು ಕಾಳಜಿ ವಹಿಸಬೇಕಾಗಿದೆ. ಮೊದಲನೆಯದಾಗಿ, ಇದು ಒಬ್ಬರಿಂದ ಮತ್ತೊಬ್ಬ ವ್ಯಕ್ತಿಗೆ ಸುಲಭವಾಗಿ ಹರಡುವ ಸೋಂಕು. ಜೊತೆಗೆ ಇದು ಉಸಿರಾಟದ ತೊಂದರೆಯನ್ನು ಉಂಟು ಮಾಡುತ್ತದೆ. ಎರಡನೆಯದಾಗಿ, ಸೋಂಕು ತಗುಲಿದ ಕೆಲವರಿಗೆ ಇದು ಮಾರಕವಾಗಬಹುದು. ಮೂರನೆಯದಾಗಿ, ನಮ್ಮ ದೇಹಕ್ಕೆ ಇದನ್ನು ತಡೆಯುವ ಸಹಜ ಸಾಮರ್ಥ್ಯ ಇಲ್ಲ. ಇದನ್ನು ತಡೆಯಬಲ್ಲ ಲಸಿಕೆಗಳೂ ಇಲ್ಲ. ಮತ್ತು ಸದ್ಯಕ್ಕೆ ಅದನ್ನು ಗುಣಪಡಿಸುವ ಔಷಧಿಗಳೂ ಇಲ್ಲ.

ಈ ಖಾಯಿಲೆ ಮನುಷ್ಯರ ಮೇಲೆ ಬೀರುವ ಪರಿಣಾಮವೇನು ಹಾಗೂ ಈ ಸೋಂಕು ಹರಡುವುದು ಹೇಗೆ?

ಸೋಂಕು ತಗುಲಿದ ಬಹುತೇಕ ಜನರಿಗೆ ಫ್ಲೂ ಬಂದಾಗ ಕಾಣುವಂತಹ ಲಕ್ಷಣಗಳೇ ಇರುತ್ತವೆ. ಏರು ಜ್ವರ, ಒಣ ಕೆಮ್ಮು ಮತ್ತು ಸುಸ್ತು ಸಾಮಾನ್ಯ. ಕೆಲವರಿಗೆ ಮೈ ಕೈ ನೋವು, ಉಸಿರಾಟದ ತೊಂದರೆ, ಸ್ನಾಯುಗಳು ಹಾಗೂ ಸಂಧಿಗಳ ನೋವು, ಗಂಟಲು ನೋವು, ತಲೆನೋವು, ಛಳಿ, ಮತ್ತು ಒಮ್ಮೊಮ್ಮೆ ಬೇಧಿ ಕೂಡ ಕಾಣಿಸಬಹುದು ಈ ಖಾಯಿಲೆ ಮಕ್ಕಳು, ಯುವಕರಿಗಿಂತಲೂ ವಯಸ್ಸಾದವರನ್ನು ಹೆಚ್ಚು ಬಾಧಿಸುವಂತೆ ತೋರುತ್ತದೆ. ಒಂಭತ್ತು ವರ್ಷ ವಯಸ್ಸಿನೊಳಗೆ ಇರುವ ಮಕ್ಕಳನ್ನು ಇದು ಹೆಚ್ಚು ಬಾಧಿಸುವುದಿಲ್ಲ. ಆದರೆ ಡಯಾಬಿಟೀಸು, ಹೃದಯದ ತೊಂದರೆಗಳು, ಶ್ವಾಸಕೋಶದ ತೊಂದರೆಗಳು ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವಂತಹವರಲ್ಲಿ ಇದರ ಪರಿಣಾಮ ಹೆಚ್ಚು. ಐದರಲ್ಲಿ ಒಬ್ಬ ರೋಗಿ ನ್ಯುಮೋನಿಯಾದಂತಹ ಬಲು ತೀವ್ರವಾದ ಸಂಕಟದಿಂದ ನರಳುತ್ತಾರೆ.

ಈ ಸೋಂಕು ರೋಗಿ ಕೆಮ್ಮಿದಾಗ ಅಥವಾ ಸೀನಿದಾದ ಹೊರ ಚೆಲ್ಲುವ ಹನಿಗಳ ಮೂಲಕ ಹರಡುತ್ತದೆ. ಈ ಹನಿಗಳು ನೆಲದ ಮೇಲೋ, ಅಥವಾ ಇನ್ಯಾವುದಾದರೂ ವಸ್ತುವಿನ ಮೇಲೋ ಬಿದ್ದಿರುತ್ತದೆ. ಅಂತಹ ವಸ್ತುವನ್ನು ಮುಟ್ಟಿದ ಕೈಯಿಂದಲೇ ಮೂಗು, ಕಣ್ಣು, ಬಾಯಿಯನ್ನು ಮುಟ್ಟಿದಾಗ ನಿಮಗೂ ಹರಡುತ್ತದೆ.

ಈ ಸೋಂಕು ನನಗಾಗಲಿ, ನನ್ನಿಂದ ಬೇರೆಯವರಿಗಾಗಲಿ ಹರಡದಂತೆ ತಡೆಯಬಹುದೇ? ಹೇಗೆ?

ಖಂಡಿತ. ಈ ವೈರಸ್ಸು ಉಸಿರಾಟದ ಮೂಲಕ ಹರಡುತ್ತದೆ. ಅಂದರೆ ಸೋಂಕಿರುವ ವ್ಯಕ್ತಿ ಸೀನಿದಾಗ ಇಲ್ಲವೇ ಕೆಮ್ಮಿದಾಗ ಅವರ ಮೂಗಿನಿಂದ ಸಣ್ಣ ಹನಿಗಳು ಹೊರ ಚೆಲ್ಲುತ್ತವೆ. ಇವು ಹೊರಬಂದು ಯಾರದ್ದಾದರೂ ಕೈಯೋ, ಬಾಗಿಲಿ ಹಿಡಿಯ ಮೇಲೋ, ಕೈಪಿಡಿಗಳ ಮೇಲೋ ಜನ ಮುಟ್ಟುವಂತಹ ಸ್ಥಳಗಳಲ್ಲಿ ನೆಲೆಯಾಗಬಹುದು. ಅವನ್ನು ಮುಟ್ಟಿದ ಕೈಯಿಂದಲೇ ಮುಖವನ್ನು ಮುಟ್ಟಿಕೊಂಡಾಗ ಈ ಹನಿಗಳಲ್ಲಿರುವ ವೈರಸ್ಸು ನಿಮ್ಮ ಬಾಯಿ, ಮೂಗು ಹಾಗೂ ಶ್ವಾಸಕೋಶಕ್ಕೆ ಇದು ದಾಟಬಹುದು. ಇದನ್ನು ತಡೆಯುವ ಉಪಾಯ? ನಿಮ್ಮ ಕೈಯನ್ನು ಚೆನ್ನಾಗಿ ತೊಳೆದುಕೊಳ್ಳಿ. ವೈರಸ್ಸು ದಾಟದಂತೆ ಎಚ್ಚರ ವಹಿಸಿ. ಕೈ ತೊಳೆಯುವುದು ಹೇಗೆ ಎನ್ನುವುದನ್ನು ತಿಳಿಸುವ ಹಲವು ವೀಡಿಯೋಗಳು ಯೂಟ್ಯೂಬಿನಲ್ಲಿ ಇವೆ. ಈ ವಿಡಿಯೊ ನೋಡಿ. ವೈದ್ಯರು ಹಾಗೂ ನರ್ಸುಗಳು ತಮ್ಮ ಕೈಯನ್ನು ಹೇಗೆ ತೊಳೆಯುತ್ತಾರೆಂಬುದನ್ನು ಗಮನಿಸಿ. ನಲ್ಲಿಯನ್ನು ಮುಟ್ಟುವ ಮುನ್ನ ಸಾಬೂನಿನಿಂದ ತೊಳೆದಿದ್ದರೆ ಬೇಕೆಂದಾಗ ಅದನ್ನು ಮುಚ್ಚಿ ತೆರೆಯಬಹುದು. ನೀರನ್ನೂ ಉಳಿಸಬಹುದು.

ನೀರು ಮತ್ತು ಸಾಬೂನು ಇಲ್ಲದಿದ್ದರೆ, ಮದ್ಯಸಾರ ಬೆರೆತ ಸ್ಯಾನಿಟೈಸರ್‌ ಅಥವಾ ಹ್ಯಾಂಡ್‌ ವಾಷ್‌ ಬಳಸಬಹುದು. ನಿಮ್ಮ ಕೈಯಿಂದ ಮುಖವನ್ನು ಮುಟ್ಟುವುದನ್ನು ಅದಷ್ಟೂ ತಡೆಯುವುದು ಒಳ್ಳೆಯದು.

ಇದಲ್ಲದೆ ಜನಜಂಗುಳಿ ಇರುವ ಕಡೆ ಹೋಗುವುದರಿಂದ ನೇರ ಸಂಪರ್ಕ ಹೆಚ್ಚಾಗಿ ಸೋಂಕು ತಗುಲುವ ಸಾಧ್ಯತೆಯೂ ಹೆಚ್ಚಾಗುತ್ತದೆ. ಜನರಿಂದ ಹೀಗೆ ದೂರ ಇರುವುದನ್ನು ದೂರವಾಸ ಎಂದು ಕರೆಯುತ್ತಾರೆ. ಜನರಿಂದ ಎಷ್ಟು ದೂರ ಇರಬೇಕು? ಮೂರರಿಂದ ಆರು ಅಡಿ ದೂರ ಇರುವುದು ಸುರಕ್ಷಿತ. ಕೈ ಕುಲುಕುವುದನ್ನು ಕಡಿಮೆ ಮಾಡಿ. ಭಾರತೀಯರು ಮಾಡುವಂತೆ ನಮಸ್ತೆಯನ್ನೋ, ಅದಾಬ್‌ ಎಂದೋ ಹೇಳಿ ದೈಹಿಕವಾಗಿ ಸಂಪರ್ಕಿಸುವುದನ್ನು ತಡೆಯಬಹುದು.

ಮನೆಯಿಂದ ಹೊರ ಹೋಗುವಾಗಲೆಲ್ಲ ಮುಖಗವುಸು ಅಥವಾ ಮಾಸ್ಕು ಧರಿಸಬೇಕೇ?

ಮುಖಗವುಸು ನಿಮ್ಮನ್ನು ರಕ್ಷಿಸುವುದಕ್ಕಿಂತಲೂ ಬೇರೆಯವರಿಗೆ ನಿಮ್ಮಿಂದ ಸೋಂಕು ಹರಡದಂತೆ ತಡೆಯುವ ಉಪಾಯವಷ್ಟೆ. ಮುಖಗವುಸನ್ನು ಎಲ್ಲರೂ ಧರಿಸಬೇಕಿಲ್ಲ. ಎಲ್ಲರೂ ಇದನ್ನು ಕೊಳ್ಳುವುದರಿಂದಾಗಿ ಇದನ್ನು ಅವಶ್ಯಕವಾಗಿ ಬಳಸಲೇ ಬೇಕಾದ ವೈದ್ಯರು ಹಾಗೂ ಆರೋಗ್ಯ ಸೇವೆಯ ಸಿಬ್ಬಂದಿಗೆ ಮುಖಗವುಸಿನ ಕೊರತೆ ಉಂಟಾಗಬಹುದು. ನಿಮಗೆ ಉಸಿರಾಟದ ತೊಂದರೆ, ನೆಗಡಿ ಇದೆ ಎಂದೇನಾದರೂ ಅನುಮಾನವಿದ್ದರೆ ಖಂಡಿತ ಮುಖಗವುಸನ್ನು ಬಳಸಿ. ಇಲ್ಲ. ಆರೋಗ್ಯವಾಗಿದ್ದೇನೆ ಎನಿಸಿದರೆ ಬೇಡ.

ನೆಗಡಿ ಅಥವಾ ಫ್ಲೂ ಲಕ್ಷಣಗಳು ಇದ್ದರೆ ಏನು ಮಾಡಲಿ? ವೈದ್ಯರ ಬಳಿ ಪರೀಕ್ಷೆಎ ಮಾಡಿಸಲೇ? ಅಥವಾ ಮನೆಯೊಳಗೇ ದಿಗ್ಬಂಧನದಲ್ಲಿ ಇರಬೇಕೇ?

ಕೋವಿಡ್-‌19ರ ಲಕ್ಷಣಗಳು ಫ್ಲೂ, ನೆಗಡಿ ಇತ್ಯಾದಿ ಹಲವು ಸಾಮಾನ್ಯ ಖಾಯಿಲೆಗಳ ಲಕ್ಷಣಗಳನ್ನೇ ಹೋಲುವುದರಿಂದ ನಿಮಗೆ ಕೋವಿಡ್-‌19ರ ಬದಲಿಗೆ ಇವು ಯಾವುದಾದರೂ ಸೋಂಕಿರಬಹುದು. ಅಸ್ವಸ್ಥರೆನ್ನಿಸಿದರೆ ಕೂಡಲೇ “ಸ್ವ-ದಿಗ್ಬಂಧನ” ಹಾಕಿಕೊಳ್ಳುವುದು ಒಳ್ಳೆಯದು. ಬಹುತೇಕ ಸಂದರ್ಭಗಳಲ್ಲಿ ಇದು ಉಚಿತವೂ ಹೌದು. ಅಂದರೆ ಮನೆಯಲ್ಲಿ ಅಥವಾ ಎಲ್ಲೇ ಇದ್ದರೂ ಬೇರೆಯವರ ಜೊತೆ ಸಂಪರ್ಕ ಕಡಿಮೆ ಮಾಡಿಕೊಂಡು ಒಂಟಿಯಾಗಿ, ಸೋಂಕು ಹರಡದಂತೆ ಎಚ್ಚರಿಕೆ ವಹಿಸಿ ಇರುವುದು. ಇದನ್ನು ಆದಷ್ಟೂ ಕಟ್ಟುನಿಟ್ಟಾಗಿ ಮಾಡಬೇಕು. ನೀವು ಹಾಗೂ ನಿಮ್ಮನ್ನು ಆರೈಕೆ ಮಾಡುತ್ತಿರುವವರ ನಡುವೆ ಯಾವುದೇ ನೇರವಾದ ಇಲ್ಲವೇ ಪರೋಕ್ಷವಾದ ದೈಹಿಕ ಸಂಪರ್ಕ ಇಲ್ಲದಂತೆ ಎಚ್ಚರ ವಹಿಸಬೇಕು. ಆರೈಕೆ ಮಾಡುವವರಿಗೆ ಸೋಂಕು ತಗುಲದಂತೆ ನೋಡಿಕೊಳ್ಳಬೇಕು.

ಉಸಿರಾಟದಲ್ಲಿಯೂ ಶಿಸ್ತು, ಸ್ವಚ್ಛತೆ ಇರಲಿ. ಕೆಮ್ಮುವಾಗ ತೋಳಿನಿಂದಲೋ, ಅಥವಾ ಸುಲಭವಾಗಿ ಬಿಸಾಡಬಹುದಾದ ಕಾಗದದ ಕರವಸ್ತ್ರದಿಂದಲೋ ಮೂಗು, ಬಾಯಿಯನ್ನು ಮುಚ್ಚಿಕೊಳ್ಳಬೇಕು. ನಿಯತವಾಗಿ ಕೈಗಳನ್ನು ತೊಳೆದುಕೊಳ್ಳುತ್ತಿರಬೇಕು. ಸುತ್ತಲಿರುವವರೂ ಇದನ್ನು ಪಾಲಿಸುವಂತೆ ನೋಡಿಕೊಳ್ಳಬೇಕು. ಸಾಕಷ್ಟು ದ್ರವಾಹಾರವನ್ನು ಸೇವಿಸಬೇಕು. ಹಣ್ಣು-ಹಂಪಲುಗಳನ್ನು ತಿಂದು ರೋಗನಿರೋಧಕ ಶಕ್ತಿ ಹೆಚ್ಚುವಂತೆ ನೋಡಿಕೊಳ್ಳಬೇಕು. ಉಸಿರಾಡಲು ತೊಂದರೆ ಏನಾದರೂ ಆದರೆ ನಿಗದಿ ಪಡಿಸಿದ ಹಾಟ್‌ ಲೈನುಗಳಿಗೆ ಕರೆ ಮಾಡಿ ಸಲಹೆ ಕೇಳಬೇಕು. ಅಂದರೆ ನಿರ್ದಿಷ್ಟವಾಗಿ ಸೂಚಿಸದಿದ್ದರೆ ಹಾಗೂ ನಿಮ್ಮ ರೋಗ ಲಕ್ಷಣಗಳು ಲಘುವಾಗಿದ್ದರೆ ವೈದ್ಯರನ್ನು ಕಾಣಲು ಹೋಗಬೇಕಿಲ್ಲ. ಏಕೆಂದರೆ ಒಂದು ವೇಳೆ ನಿಮಗೆ ಸೋಂಕು ಇದ್ದರೆ, ವೈದ್ಯರ ಬಳಿ ಹೋಗುವ ಹಾದಿಯಲ್ಲಿ ನೀವು ಭೇಟಿಯಾಗುವ ಇತರರಿಗೂ ನೀವು ಅದನ್ನು ದಾಟಿಸಬಹುದು. ನಿಮಗೆ ಕೆಮ್ಮು ಇದ್ದು, ಮೂಗು ಸೋರುತ್ತಿದ್ದರೆ, ಮುಖಗವುಸನ್ನು ಧರಿಸುವುದರಿಂದ ಇತರರಿಗೆ ಸೋಂಕು ಹರಡದಂತೆ ತಡೆಯಬಹುದು. ಇದು ಇಲ್ಲದಿದ್ದರೆ ಮುಖಗವುಸು ಧರಿಸುವುದರಿಂದ ಬೇರೇನೂ ಪ್ರಯೋಜನವಿಲ್ಲ.

ಸೋಂಕು ಇದೆ ಎಂಬ ಅನುಮಾನವಿದ್ದವರನ್ನು “ದಿಗ್ಬಂಧನ” ಅರ್ಥಾತ್‌ ಕ್ವಾರೆಂಟೈನ್‌ ಮಾಡುತ್ತಾರೆ ಎನ್ನುತ್ತಾರಲ್ಲ? ಹಾಗೆಂದರೇನು? ಅದೇನು ಅಷ್ಟೊಂದು ಭಯಂಕರವೇ?

ಕ್ವಾರಂಟೈನ್‌ ನಲ್ಲಿ ಎರಡು ವಿಧಗಳಿವೆ.

ಮೊದಲನೆಯದರಲ್ಲಿ ನಿಮ್ಮನ್ನು ಸರಕಾರ ಸಿದ್ಧಪಡಿಸಿರುವ ಕೋಣೆಯಲ್ಲಿ ನಿರ್ಬಂದಿಸಿ ಇಡಲಾಗುತ್ತದೆ. ಇದರಿಂದ ಬೇರೆಯವರಿಗೆ ನಿಮ್ಮಿಂದ ಸೋಂಕು ಹರಡುವುದು ಸಂಪೂರ್ಣ ಕಡಿಮೆ ಆಗುತ್ತದೆ. ಇದು ನಿಮಗೆ ಸೋಂಕು ಹತ್ತಿದೆ ಎನ್ನುವ ಸಾಧ್ಯತೆಗಳು ಹೆಚ್ಚಿದ್ದಾಗ ಮಾತ್ರ. ಉದಾಹರಣೆಗೆ ನೀವು ಸೋಂಕು ಇದ್ದಂತಹ ಯಾವುದೇ ದೇಶದಿಂದ ಭಾರತಕ್ಕೆ ಬಂದಿದ್ದು, ನಿಮಗೂ ಸೋಂಕು ತಗುಲಿದ ರೋಗಲಕ್ಷಣಗಳು ಕಾಣಿಸಿಕೊಂಡಿದ್ದರೆ ಆಗ ಈ ದಿಗ್ಬಂಧನದಲ್ಲಿ ಇರಿಸುತ್ತಾರೆ.

ಉಳಿದಂತೆ ಈ ಸೋಂಕು ತಗುಲಿರುವುದು ಖಚಿತವಾಗಿರುವ ಅಂದರೆ ಪಾಸಿಟಿವ್‌ ಆಗಿರುವ ಯಾವದೇ ವ್ಯಕ್ತಿಯ ಜೊತೆಗೆ ನೀವು ಸಂಪರ್ಕದಲ್ಲಿದ್ದಿರೆಂಬ ಅನುಮಾನವಿದ್ದಾಗ, ನಿಮ್ಮನ್ನು ಸ್ವಯಂ-ದಿಗ್ಬಂಧನ ವಿಧಿಸಿಕೊಳ್ಳಲು ಸಲಹೆ ನೀಡುವರು. ಇದರ ಅರ್ಥ. ನೀವು ಮನೆಯಲ್ಲಿಯೋ, ಇನ್ಯಾವುದಾದರೂ ಸ್ಥಳದಲ್ಲಿಯೋ ಬೇರೆಯವರ ಸಂಪರ್ಕವು ಮಿತಿಯಾಗಿರುವಂತಹ ಜಾಗದಲ್ಲಿ ಇರುವುದು.

ಹೀಗೆ ಕ್ವಾರಂಟೈನ್‌ ಮಾಡುವುದರಿಂದ ಇತರರ ಜೊತೆಗೆ ನೇರ ಸಂಪರ್ಕದಲ್ಲಿ ಬರುವುದು ಕಡಿಮೆಯಾಗುತ್ತದೆ. ಆರೋಗ್ಯಾಧಿಕಾರಿಗಳೂ ನಿಮ್ಮ ಆರೋಗ್ಯದ ಮೇಲೆ ನಿಗಾ ಇಡುವುದು ಸುಲಭವಾಗುತ್ತದೆ. ಕ್ವಾರಂಟೈನ್‌ ಅವಧಿ ಕಳೆದ ನಂತರ ನಿಮಗೆ ಸೋಂಕು ಇಲ್ಲವೆನ್ನುವುದು ಖಚಿತವಾದರೆ ನಿಮ್ಮನ್ನು ಬಿಡುಗಡೆ ಮಾಡಲಾಗುವುದು. ಈ ಅವಧಿ ಸಾಮಾನ್ಯವಾಗಿ ಎರಡುವಾರಗಳಷ್ಟು ಇರುತ್ತದೆ.

ಕ್ವಾರಂಟೈನಿನ ಬಗ್ಗೆ ಭಯ ಬೇಕಿಲ್ಲ. ಮೊದಲಿಗೆ ನಾವು ನಿತ್ಯ ಸಂಪರ್ಕದಲ್ಲಿರುವ ವ್ಯಕ್ತಿಗಳ ಒಡನಾಟ ಇಲ್ಲದೆ ತುಸು ಕಷ್ಟವಾಗಬಹುದು. ಅದರೆ ಮೊದಲೇ ಯೋಜಿಸಿ ಸಿದ್ಧಪಡಿಸಿದ ಕ್ವಾರಂಟೈನ್‌ ವ್ಯವಸ್ಥೆಯಲ್ಲಿ ನೀವು ನಿಮ್ಮ ಬಂದ, ಬಾಂಧವರ ಜೊತೆಗೆ ಹಾಗೂ ಹೊರಗೆ ನಡೆಯುತ್ತಿರುವ ವಿದ್ಯಮಾನಗಳ ಜೊತೆಗೆ ಸಂಪರ್ಕದಲ್ಲಿರುವಂತೆ ಇರುತ್ತದೆ. ಇಲ್ಲಿ ನಿಮಗೆ ಹಿತವೆನ್ನಿಸುವಂತಹ ಒಳ್ಳೆಯ ಪೌಷ್ಟಿಕ ಆಹಾರ ಹಾಗೂ ಇತರೆ ಸೌಲಭ್ಯಗಳು ಇರುತ್ತವೆಯಾದ್ದರಿಂದ ವಾಸ ಕಷ್ಟವೆನ್ನಿಸದು.

ಖಾಯಿಲೆಯ ಬೆಳೆವಣಿಗೆಯನ್ನು ಗಮನಿಸಿ ಕ್ವಾರೆಂಟೈನಿನ ನಿಯಮಗಳನ್ನು ಅಗಾಗ್ಗೆ ಪುನರ್ಪರಿಶೀಲಿಸಬೇಕಾಗಬಹುದು. ಸರ್ಕಾರವು ಯಾರನ್ನು ಕ್ವಾರೆಂಟೈನು ಮಾಡಬೇಕು, ಯಾರನ್ನು ಅಲ್ಲ ಎಂದು ತೀರ್ಮಾನಿಸಲು ಬಲು ಕಠಿಣವಾದ ನಿಯಮಗಳನ್ನು ವಿಧಿಸಬಹುದು.

ಮಾಂಸ ಸೇವಿಸುವುದರಿಂದಲೋ, ಚೀನಾದಿಂದ ಆಮದಾದ ವಸ್ತುಗಳನ್ನು ಬಳಸುವುದರಿಂದಲೋ ಸೋಂಕು ಬರುವುದೇ?

ಖಂಡಿತ ಇಲ್ಲ. ಮೊದಲಿಗೆ ಇದು ಉಸಿರಾಟದ ಮೂಲಕ ಮನುಷ್ಯರಿಂದ ಮನುಷ್ಯರಿಗೆ ಹರಡುವ ವೈರಸ್ಸು. ನಿಮಗೆ ಎದುರಾಗುವ ಎಲ್ಲ ಪ್ರಾಣಿಗಳಲ್ಲಿಯೂ ಇದು ಇರುವುದಿಲ್ಲ. ಆದ್ದರಿಂದ ಮಾಂಸವನ್ನು ತಿನ್ನುವುದಕ್ಕೂ, ಕೊರೊನಾ ವೈರಸ್ಸು ಸೋಂಕಿಗೂ ಸಂಬಂಧ ಇಲ್ಲ. ಅಲ್ಲದೆ ಇಂತಹ ವೈರಸ್ಸುಗಳು ಹೀಗೆ ತೆರೆದಿಟ್ಟ ಮೇಲ್ಮೈಯಲ್ಲಿ ಹೆಚ್ಚು ಕಾಲ ಬದುಕುವುದಿಲ್ಲ. ಜೊತೆಗೆ ಬಲು ಬಿಸಿಯಾದ ವಾತಾವರಣದಲ್ಲಿಯೂ ಇವು ಜೀವಿಸುವುದಿಲ್ಲ. ಚೀನಾದಿಂದ ಭಾರತಕ್ಕೆ ತಲುಪುವುದಕ್ಕೆ ಬೇಕಾಗುವ ಅವಧಿಯಲ್ಲಿ ಈ ವೈರಸ್ಸು ಪ್ಯಾಕೇಜುಗಳ ಮೇಲೆ ಉಳಿದಿರುವ ಸಾಧ್ಯತೆ ಕಡಿಮೆ. ಹೀಗಾಗಿ ಚೀನಾದಿಂದ ಬಂದ ವಸ್ತುಗಳನ್ನೂ ಯಾವುದೇ ಭಯವಿಲ್ಲದೆ ಬಳಸಬಹುದು.

ಸೋಂಕಿನ ಭೀತಿಯಿಂದ ಶಾಲೆ ಕಾಲೇಜು, ಕಛೇರಿಗಳನ್ನು ಮುಚ್ಚಬೇಕೇ?

ಇದು ಸೋಂಕು ಯಾವ ಹಂತದಲ್ಲಿದೆ ಎನ್ನುವುದನ್ನು ಅವಲಂಬಿಸಿದೆ. ಆರಂಭದ ಹಂತಗಳಲ್ಲಿ, ಅಂದರೆ ಇದು ಅತ್ಯುಲ್ಬಣಾವಸ್ಥೆಯನ್ನು ತಲುಪುವ ಮೊದಲು, ಇದನ್ನು ಹತ್ತಿಕ್ಕಲು ಎಲ್ಲ ಪ್ರಯತ್ನವನ್ನೂ ಮಾಡಬೇಕು. ಶಾಲೆ, ಕಾಲೇಜುಗಳನ್ನು ಮುಚ್ಚುವುದು ಇದಕ್ಕೆ ಒಂದು ಮಾರ್ಗ ಆದರೆ ಒಮ್ಮೆ ಸೋಂಕು ವ್ಯಾಪಕವಾದ ಮೇಲೆ ಇಂತಹ ಕ್ರಮಗಳು ಅಷ್ಟು ಫಲ ನೀಡಲಿಕ್ಕಿಲ್ಲ.

ಸರ್ಕಾರದ ಲೆಕ್ಕಾಚಾರದಲ್ಲಿ ನಾವು ಇನ್ನೂ ಸೋಂಕಿನ ಮೊದಲ ಹಂತದಲ್ಲಿಯೇ ಇದ್ದೇವೆ ಎನ್ನುವುದಾದರೆ, ಅಂದರೆ ಸೋಂಕು ಸಮುದಾಯದಲ್ಲಿ ಸಾಂಕ್ರಾಮಿಕ ಆಗುವುದನ್ನು ತಡೆಯುವ ಸಾಧ್ಯತೆ ಇದೆ ಎನ್ನುವುದಾದರೆ, ಶಾಲೆ ಕಾಲೇಜುಗಳನ್ನು ಮುಚ್ಚುವುದು ಅರ್ಥವತ್ತಾದ ಕ್ರಮ. ಭಾರತದ ಹಲವು ರಾಜ್ಯಗಳಲ್ಲಿ ಈಗಾಗಲೇ ಈ ಕ್ರಮವನ್ನು ಕೈಗೊಂಡಾಗಿದೆ.

ಶಾಲೆ ಕಾಲೇಜು, ಕಛೇರಿಗಳು ಮುಚ್ಚಿರಲಿ, ಇಲ್ಲದಿರಲಿ ವೃದ್ಧರು ಹಾಗೂ ಈಗಾಗಲೇ ಬೇರೆ ಖಾಯಿಲೆಗಳಿಂದಾಗಿ ಈ ಸೋಂಕಿನಿಂದಾಗಿ ಹೆಚ್ಚು ಹಾಗೂ ತೀವ್ರತೆರನಾದ ಬಾಧೆ ಪಡುವುದರಿಂದ ಅಂತಹವರ ಬಗ್ಗೆ ಯಾವಾಗಲೂ ಕಾಳಜಿ ಇರುವುದು ಒಳ್ಳೆಯದು. ಈ ರೀತಿಯಲ್ಲಿ ಸಂಕಟದ ಸಾಧ್ಯತೆ ಹೆಚ್ಚಿರುವವರಿಗೆ ಸೋಂಕು ತಗುಲದಂತೆ ರಕ್ಷಿಸುವುದಕ್ಕೆ ಎಲ್ಲ ಪ್ರಯತ್ನಗಳನ್ನೂ ಕೈಗೊಳ್ಳಬೇಕು.

ನನಗೇನನಾದರೂ ಸೋಂಕು ತಗುಲಿದರೆ ಬಳಸಲು ಲಸಿಕೆ ಇಲ್ಲವೇ ಔಷಧಿ ಉಂಟೇ?

ಇಲ್ಲ. ಸದ್ಯಕ್ಕೆ ಅಂತಹುದು ಯಾವುದೂ ಇಲ್ಲ. ಪ್ರಪಂಚದ ಹಲವು ಪ್ರಯೋಗಾಲಯಗಳು ಈ ಬಗ್ಗೆ ಪ್ರಯತ್ನ ನಡೆಸುತ್ತಿವೆಯಾದರೂ ಯಾವ ಲಸಿಕೆಯಾಗಲಿ, ಔಷಧವಾಗಲಿ ಇನ್ನೂ ಸಿದ್ಧವಿಲ್ಲ. ಕೋವಿಡ್‌ ೧೯ರ ಚಿಕಿತ್ಸೆಗಾಗಿ ಹಲವು ಲಸಿಕೆಗಳನ್ನು ಸಿದ್ಧಪಡಿಸಲಾಗುತ್ತಿದೆ ಹಾಗೂ ಬೇರೆ ಖಾಯಿಲೆಯ ಚಿಕಿತ್ಸೆಗೆ ಬಳಸುವ ಔಷಧಗಳು ಇದನ್ನು ಗುಣಪಡಿಸಬಹುದೋ ಎಂದೂ ಹಲವು ಔಷಧಗಳನ್ನು ಪರೀಕಿಸಲಾಗುತ್ತಿದೆ. ಸುರಕ್ಷಿತವಾದ ಲಸಿಕೆಯನ್ನು ಮಾಡಲು ಕನಿಷ್ಟ ಎಂದರೆ ಒಂದರಿಂದ ಎರಡು ವರ್ಷಗಳಾದರೂ ಬೇಕು.

ಈ ಸೋಂಕನ್ನು ಕೆಲವು ಆಯುರ್ವೇದ ಹಾಗೂ ಹೋಮಿಯೋಪತಿಯ ಮೂಲಿಕೆಗಳನ್ನು ಬಳಸಿ ಗುಣಪಡಿಸಬಹುದು ಎಂದು ಹೇಳುವುದನ್ನು ಕೇಳಿದ್ದೇನೆ. ಇದನ್ನು ನಂಬಬಹುದೇ?

ಪಾರಂಪರಿಕ ಔ಼ಷಧಗಳು ಗುಣಪಡಿಸುವ ಬಗ್ಗೆ ಹೆಚ್ಚು ತಿಳಿದಿಲ್ಲ. ಆದರೂ ಕೆಲವರಿಗೆ ಅವುಗಳಲ್ಲಿ ಗಾಢ ನಂಬಿಕೆ ಇದೆ. ಈ ಔಷಧಗಳು ಕೆಲವು ಸಂದರ್ಭಗಳಲ್ಲಿ ಪರಿಣಾಮಕಾರಿ ಎಂಬ ಬಗ್ಗೆ ಕೇವಲ ದಂತಕಥೆಗಳೇ ಪುರಾವೆಯಾಗಿವೆಯಷ್ಟೆ. ಸ್ವಾಸ್ಥ್ಯ ಎನ್ನುವುದು ಶರೀರ ಮತ್ತು ಮನಸ್ಸುಗಳೆರಡರ ಕ್ರಿಯೆಯಾಗಿದ್ದರಿಂದ ಈ ವಿಶ್ವಾಸವೇ ಕೆಲವು ಸಂದರ್ಭದಲ್ಲಿ ಔ಼ಷಧದ ಪರಿಣಾಮ ಇಲ್ಲದಿದ್ದರೂ, ಅದು ಫಲಕೊಡುತ್ತಿದೆ ಎಂದು ನಂಬಿಸಿಬಿಡುತ್ತದೆ. ಕೆಲವು ಸಂದರ್ಭದಲ್ಲಿ ಇದು ಚಿಕಿತ್ಸೆಗೆ ಅನುಕೂಲಿಯೂ ಹೌದು. ಈ ಪರಿಣಾಮವನ್ನು ಪ್ಲೇಸೆಬೋಪರಿಣಾಮ ಎನ್ನುತ್ತೇವೆ.

ಸಾಮಾಜಿಕವಾಗಿ ದೂರವನ್ನು ಕಾಯ್ದುಕೊಳ್ಳುವುದು, ಉಸಿರಾಟದಲ್ಲಿ ಸ್ವಚ್ಛತೆ ಮತ್ತು ಕೈ ತೊಳೆದುಕೊಳ್ಳುವುದೇ ಮೊದಲಾದ ಸರಳ ವಿಧಾನಗಳು ಈ ಸೋಂಕು ಹಾಗೂ ಇಂತಹುದೇ ಇತರ ಸೋಂಕುಗಳು ಹರಡದಂತೆ ತಡೆಯುವುದರಲ್ಲಿ ಇವುಗಳಿಗಿಂತಲೂ ಉತ್ತಮ ಕ್ರಮಗಳೆಂದು ನಿರೂಪಿತವಾಗಿವೆ. ಇಂತಹ ಪರಿಣಾಮಕಾರಿಯೆಂದು ಗೊತ್ತಾಗಿರುವ ಕ್ರಮಗಳನ್ನು ಪಾಲಿಸುವುದರಿಂದ, ಹಾಗೂ ಪರೀಕ್ಷೆಗೊಳಪಡದ ಕೇವಲ ಹೇಳಿಕೆಯ ವಿಧಾನಗಳನ್ನು ದೂರವಿಡುವುದರಿಂದ ನಿಮ್ಮನ್ನೂ, ಇತರರನ್ನೂ ಸೋಂಕು ಬಾರದಂತೆ ರಕ್ಷಿಸಿಕೊಳ್ಳಬಹಹುದು. ಇದಲ್ಲದೆ ತಾಜಾ ಹಣ್ಣು ತರಕಾರಿಗಳನ್ನು ತಿಂದು, ಹಾಗೂ ಬಿಸಿಲಿನಲ್ಲಿ ಅಡ್ಡಾಡಿ, ಚೆನ್ನಾಗಿ ನೀರು ಸೇವಿಸಿ ಶರೀರದ ಸಹಜ ರೋಗಪ್ರತಿರೋಧಕತೆ ಸುಧಾರಿಸಿಕೊಳ್ಳಿ. ಮಾನಸಿಕ ಒತ್ತಡಗಳು ಸೋಂಕಿನ ವಿರುದ್ಧ ಹೋರಾಡುವ ಶರೀರದ ಸಾಮರ್ಥ್ಯವನ್ನು ಕುಗ್ಗಿಸುತ್ತವೆಯಾದ್ದರಿಂದ ಒತ್ತಡಗಳನ್ನು ಆದಷ್ಟೂ ಕಡಿಮೆ ಮಾಡಿಕೊಳ್ಳಿ.

ಕೋವಿಡ್‌ -೧೯ ಹರಡದಂತೆ ತಡೆಯಲು ಸರ್ಕಾರ ಏನು ಮಾಡುತ್ತಿದೆ?

ಸರ್ಕಾರವು ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಗಳನ್ನು ಪಾಲಿಸುತ್ತಿದ್ದು, ಸ್ವಾಸ್ಥ್ಯ ಸೇವೆಗಳ ಪ್ರತಿಯೊಂದು ಸ್ತರವನ್ನೂ ಈ ಗುರಿಯತ್ತ ನಿರ್ದೇಶಿಸಿದೆ. ಸೋಂಕಿನ ಸಂಖ್ಯೆಯನ್ನು ಪ್ರತಿದಿನವೂ ಗಣಿಸುವ ಆರೋಗ್ಯ ಮಂತ್ರಾಲಯವು, ವೈದ್ಯರುಗಳು ಹಾಗೂ ಆಸ್ಪತ್ರೆಗಳಿಗೆ ರೋಗಿಗಳನ್ನು ಪ್ರತ್ಯೇಕಿಸಿಟ್ಟು ಚಿಕಿತ್ಸೆ ನೀಡುವ ಬಗ್ಗೆ ಸೂಚನೆಗಳನ್ನು ನೀಡುತ್ತಿದೆ. ಈ ಸೋಂಕು ತಗುಲಿರುವ ದೇಶಗಳ ಜನರು ನಮ್ಮ ದೇಶವನ್ನು ಪ್ರವೇಶಿಸದಂತೆ ಅವರ ವೀಸಾಗಳನ್ನು ರದ್ದು ಪಡಿಸಲಾಗಿದೆ. ಸೋಂಕು ಇರಬಹುದು ಎನ್ನುವ ಗುಮಾನಿ ಇರುವವರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ. ಹಲವಾರು ಸ್ಥಳಗಳಲ್ಲಿ ಪ್ರತ್ಯೇಕ ಚಿಕಿತ್ಸೆಯ ವ್ಯವಸ್ಥೇಗಳನ್ನು ಸಿದ್ಧಪಡಿಸಲಾಗಿದೆ. ತಮಗೆ ಸೋಂಕು ಇರಬಹುದು ಎಂಬ ಸಂದೇಹ ಇರುವ ಯಾರಾದರೂ ಅದನ್ನು ಪರೀಕ್ಷಿಸಿಕೊಳ್ಳುವ ವ್ಯವಸ್ಥೆ ಇರಬೇಕಿತ್ತು. ಅದು ಇನ್ನು ಆಗಬೇಕಷ್ಟೆ.

ಮುಂದಿನ ದಿನಗಳಲ್ಲಿ ಏನಾಗುತ್ತದೆ ಎನ್ನುವುದನ್ನು ಎಲ್ಲವೂ ಅವಲಂಬಿಸಿದೆ. ಸಮುದಾಯ ಸೋಂಕು ಎನ್ನುವುದು ಆರಂಭವಾದರೆ, ಆಗ ಸೋಂಕಿತರ ಸಂಖ್ಯೆ ನಮ್ಮ ದೇಶದ ಆರೋಗ್ಯ ವ್ಯವಸ್ಥೇಯು ನಿಭಾಯಿಸಲು ಆಗುವುದಕ್ಕಿಂತಲೂ ಬಲು ಅಧಿಕವಾಗಬಹುದು. ಆದ್ದರಿಂದಲೇ, ಸೋಶಿಯಲ್‌ ಡಿಸ್ಟಂಸಿಂಗ್‌ ಅಥವಾ ಸಾಮಾಜಿಕ ದೂರ ಕಾಯ್ದುಕೊಳ್ಳುವುದು, ಈಗ ಇಲ್ಲದಿದ್ದರೂ, ಮುಂದೆ ರೋಗ ಲಕ್ಷಣಗಳು ತೋರಿದಾಗ ಅದನ್ನು ನಿರ್ವಹಿಸುವುದು ಸುಲಭವಾಗುವುದಕ್ಕೆಂದು ಸೋಂಕಿರಬಹುದಾದ ಪ್ರತಿಯೊಬ್ಬರನ್ನೂ ಗುರುತಿಸಿ, ಸ್ವದಿಗ್ಬಂಧನದಲ್ಲಿ ಇರುವಂತೆ ನಿರ್ದೇಶಿಸಲಾಗುತ್ತಿದೆ. ಇದು ಸದ್ಯಕ್ಕೆ ಬಲು ಪ್ರಮುಖವಾದ ಸಂಗತಿ.

ಈ ಸೋಂಕು ಶಾಶ್ವತವೋ ಅಥವಾ ಇದು ಮರೆಯಾಗುವುದೋ? ಬೇಸಗೆಯ ಬಿಸಿ ವಾತಾವರಣ ವೈರಸ್ಸು ಹರಡುವುದನ್ನು ತಡೆಯಬಹುದೋ? ಛಳಿಗಾಲದಲ್ಲಿ ಇದು ಮರಳಿ ಕಾಣಿಸಿಕೊಳ್ಳುತ್ತದೆಯೇ?

ಇವನ್ನು ಊಹಿಸುವುದು ಕಷ್ಟ. ಫ್ಲೂ ನಂತಹ ಕೆಲವು ವೈರಸ್‌ ಸೋಂಕುಗಳು ಋತುಮಾನಕ್ಕೆ ತಕ್ಕಂತೆ ಬರುವಂಥವು ಸಾಮಾನ್ಯವಾಗಿ ಬೇಸಗೆಗಿಂತಲೂ ಛಳಿಗಾಲದಲ್ಲಿ ಹೆಚ್ಚು ಹರಡುತ್ತವೆ. ಕೋವಿಡ್-‌೧೯ ಇದೇ ರೀತಿಯ ವೈರಸ್ಸೋ ಅಲ್ಲವೋ ಅನ್ನುವುದು ನಮಗೆ ಇನ್ನೂ ಗೊತ್ತಾಗಿಲ್ಲ. ಬಹುತೇಕ ಬೇಸಗೆಯ ನಂತರ ಅದು ಸಂಪೂರ್ಣವಾಗಿ ಕಣ್ಮರೆಯಾಗುವ ಸಂಭವವಿದೆ. ಆದರೆ ಮತ್ತೊಮ್ಮೆ ಅದು ಹರಡುವ ಸಾಧ್ಯತೆಯೂ ಇದೆ. ಏನಾಗಬಹುದು ಎನ್ನುವುದು ನಮಗೆ ಇನ್ನೂ ತಿಳಿಯದ ವಿಷಯ.

ಕೊರೊನಾವೈರಸ್ಸಿನ ಬಗ್ಗೆ ವಿಶ್ವಾಸಾರ್ಹವಾದ ಹಾಗೂ ಇಂದಿನ ಮಾಹಿತಿ ನನಗೆ ಎಲ್ಲಿ ಸಿಗುತ್ತದೆ?

ವಿಶ್ವ ಆರೋಗ್ಯ ಸಂಸ್ಥೆ ( World Health Organization (WHO)), ಅಮೆರಿಕೆಯ ಸೆಂಟರ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಅಂಡ್‌ ಪ್ರಿವೆಂಶನ್‌ ( Centers for Disease Control and Prevention (CDC) of the USA) ಯುರೋಪಿನ ಸಿಡಿಸಿ (European CDC) ಸಂಸ್ಥೆಗಳ ಜಾಲತಾಣಗಳು ನಿಖರವಾದ ಮಾಹಿತಿಯನ್ನು ಒದಗಿಸುತ್ತವೆ. ಹಾಗೆಯೇ ನ್ಯೂಯಾರ್ಕ್‌ ಟೈಂಸ್‌ ಮತ್ತು ಬಿಬಿಸಿಯಂತಹ ಸುದ್ದಿ ಸಂಸ್ಥೆಗಳ ಜಾಲಪತ್ರಿಕೆಗಳೂ ಕೂಡ ನಂಬಲರ್ಹವಾದ ಮಾಹಿತಿಯನ್ನು ನೀಡುತ್ತವೆ. ಹಲವಾರು ಭಾರತೀಯ ಸುದ್ದಿಪತ್ರಿಕೆಗಳು ಕೂಡ ಕೊರೊನಾ ವೈರಸ್ಸಿನ ಬಗ್ಗೆ ನಿಖರವಾದ, ಒಳ್ಳೆಯ ಮಾಹಿತಿ ಇರುವ ಲೇಖನಗಳನ್ನು ಪ್ರಕಟಿಸಿವೆ. ಹಾಗಿದ್ದೂ ಈ ಎಲ್ಲ ಮಾಹಿತಿಯ ಮೂಲ ಆಕರವನ್ನು ನೋಡುವುದು ಒಳ್ಳೆಯದು. ಇವು ವಿಶ್ವ ಆರೋಗ್ಯ ಸಂಸ್ಥೆ ( WHO ) ಹಾಗೂ ಭಾರತ ಸರಕಾರದ ಸ್ವಾಸ್ಥ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ( Ministry of Health and Family Welfare ) ಜಾಲತಾಣಗಳನ್ನು ಗಮನಿಸಬಹುದು. ಇವು ಇಂದಿನ ಮಾಹಿತಿ-ಸೂಚನೆಗಳನ್ನು ಪ್ರಕಟಿಸುತ್ತವೆ.

ವೈಯಕ್ತಿಕವಾಗಿ ನಾನು ಎಷ್ಟು ಕಾಳಜಿಯಿಂದ ಇರಬೇಕು?

ನೀವು ಅರವತ್ತು ವಯಸ್ಸಿಗಿಂತ ಕಿರಿಯರಾಗಿದ್ದರೆ, ಇಲ್ಲವೇ ಬೇರೆ ಯಾವುದೋ ಖಾಯಿಲೆ ಇಲ್ಲದಿದ್ದರೆ ಈ ಸೋಂಕು ಬಂದರೂ ನಿಮಗೆ ತಿಳಿಯದೇ ಹೋಗಬಹುದು. ನೀವು ಇನ್ನೂ ಹಿರಿಯರಾಗಿದ್ದರೆ ಅಥವಾ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಯಾವುದೇ ಖಾಯಿಲೆ ಇದ್ದರೆ ಆಗ ಬೇರೆಯವರ ಶರೀರ ಸಂಪರ್ಕಕ್ಕೆ ಬರುವುದನ್ನು ಆದಷ್ಟೂ ತಡೆಯಬೇಕು. ಕುಟುಂಬದವರ ಸಂಪರ್ಕದಿಂದಲೂ ಸ್ವಲ್ಪ ದಿನ ದೂರ ಇರುವುದು ಒಳ್ಳೆಯದು. ಹಾಗೆಯೇ ನಿಮ್ಮ ಆರೋಗ್ಯದ ಮೇಲೂ ಕಣ್ಣಿಡಬೇಕು.

ವಯಸ್ಸು ಏನೇ ಇರಲಿ, ಸಾಮಾಜಿಕ ದೂರವನ್ನು ಕಾಯ್ದುಕೊಳ್ಳಲು ನೀಡಿದ ಸೂಚನೆಗಳನ್ನು ನೀವು ಪಾಲಿಸುವುದು ಉಚಿತ. ನಿಯತವಾಗಿ ಕೈಯನ್ನು ತೊಳೆದುಕೊಳ್ಳಿ, ಸೋಂಕು ಇರಬಹುದು ಎನ್ನುವ ಸಾಧ್ಯತೆಗಳಿರಬಹುದಾದ ಎಲ್ಲರಿಂದಲೂ ಅವರಿಗೆ ಗುಣವಾಗುವವರೆಗೂ ದೂರವಿರೆ. ನಿಮಗೆ ಈ ಸೋಂಕು ಇದೆ ಎನ್ನುವ ಅನುಮಾನವಿದ್ದರೆ, ಅಥವಾ ರೋಗ ಲಕ್ಷಣಗಳು ಕಾಣಿಸಿಕೊಂಡರೆ ಕೋವಿಡ್‌-೧೯ ಸೋಂಕನ್ನು ತಡೆಯಲೆಂದೇ ಸರಕಾರ ಆಯೋಜಿಸಿರುವ ವಿಶೇಷ ದೂರವಾಣಿಗೆ ಕರೆ ಮಾಡಿ, ನೆರವು ಕೋರಿ.